ಲಂಡನ್: ಕೊರೋನಾ ತಡೆಯಲು ಲಾಕ್ ಡೌನ್, ಸೀಲ್ ಡೌನ್, ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಇಲ್ಲಿ ಜೇನ್ನೊಣಗಳೇ ಕುಟುಂಬವೊಂದನ್ನು ಒಂದಿಡೀ ದಿನ ಕ್ವಾರಂಟೈನ್ ಮಾಡಿಸಿವೆ.
ಬ್ರಿಟನ್ನ ಬಾರ್ನ್ಸ್ಲೇ ಎಂಬ ಊರಿನಲ್ಲಿರುವ ಕುಟುಂಬವೊಂದರ ಮನೆಯ ಹಿಂದೆ 25,000 ಜೇನ್ನೊಣಗಳು ಒಮ್ಮೆಲೇ ದಾಂಗುಡಿ ಇಟ್ಟಿದ್ದಲ್ಲದೇ, ಅಲ್ಲೇ ಗೂಡು ಕಟ್ಟಿವೆ.
ಮನೆಯ ಆವರಣದಲ್ಲಿರುವ ಟ್ರಾಂಪೋಲಿನ್ ಕೆಳಗೆ ಈ ಜೇನ್ನೊಣಗಳು ತಾತ್ಕಾಲಿಕವಾಗಿ ಗೂಡು ಕಟ್ಟಿಕೊಂಡಿವೆ. ನೋಡ ನೋಡುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಜೇನ್ನೊಣಗಳ ಗುಂಪೊಂದು ಗುಂಯ್’ಗುಡುತ್ತಾ ಬಂದಿದ್ದಲ್ಲದೇ, ಕೆಲವೇ ನಿಮಿಷಗಳ ಬಳಿಕ ಟ್ರಾಂಪೋಲಿನ್ ಕೆಳಗೆ ಹೊಕ್ಕಿವೆ. ಇದನ್ನು ಕಂಡ ಮನೆ ಸದಸ್ಯ ಮ್ಯಾಥ್ಯೂ ಗ್ರೇಸ್, ಆತನ 10 ವರ್ಷದ ಮಗಳು ಹಾಗೂ ಮನೆ ನಾಯಿ ಸೇರಿದಂತೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಒಂದು ದಿನದ ಮಟ್ಟಿಗೆ ಲಾಕ್ಡೌನ್ ಆದ ಕುಟುಂಬ, ಜೇನ್ನೊಣಗಳನ್ನು ಹಿಡಿಸುವವರನ್ನು ಕರೆಯಿಸಿ, ಅವುಗಳನ್ನು ಅಲ್ಲಿಂದ ತೆರವುಗೊಳಿಸಿ ನಿಟ್ಟುಸಿರುಬಿಟ್ಟಿದೆ.