newsics.com
ಕಾಬೂಲ್: ಸರ್ಕಾರಿ ಕಟ್ಟಡವೊಂದನ್ನು ಗುರಿಯಾಗಿಸಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೂರ್ವ ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಘನಿ ಖೇಲ್ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ.
ಮಿಲಿಟರಿ ಸೌಲಭ್ಯಗಳನ್ನು ಹೊಂದಿರುವ ಆಡಳಿತ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ರಾಜ್ಯಪಾಲರ ವಕ್ತಾರ ಅತಾವುಲ್ಲಾ ಖೋಗ್ಯಾನಿ ತಿಳಿಸಿದ್ದಾರೆ.
ಮಸೀದಿಯ ಬಳಿ ಮಧ್ಯಾಹ್ನ ಪ್ರಾರ್ಥನೆಗಾಗಿ ಸ್ಥಳೀಯರು ಜಮಾಯಿಸುತ್ತಿದ್ದ ವೇಳೆ ಬಾಂಬ್ ಸ್ಫೋಟದಿಂದ ಕನಿಷ್ಠ 38 ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಆರಿಯನ್ ತಿಳಿಸಿದ್ದಾರೆ.
ಈ ಘಟನೆಯನ್ನು ಪ್ರಾಂತೀಯ ಪೊಲೀಸ್ ವಕ್ತಾರ ಫರೀದ್ ಖಾನ್ ಖಚಿತಪಡಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು ಆಫ್ಘನ್ ಭದ್ರತಾ ಪಡೆಯ ಸದಸ್ಯರಾಗಿದ್ದಾರೆ. ನಾಗರಿಕರೂ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಕೇಂದ್ರ ಕಟ್ಟಡದ ಪ್ರವೇಶ ದ್ವಾರದಲ್ಲಿ ಕಾರ್ ಬಾಂಬ್ ಸ್ಫೋಟಿಸಲಾಗಿದೆ. ದಾಳಿಯ ನಂತರ ಅನೇಕ ಶಸ್ತ್ರಸಜ್ಜಿತ ದಾಳಿಕೋರರು ಕಟ್ಟಡದೊಳಕ್ಕೆ ನುಗ್ಗಲು ಯತ್ನಿಸಿದರಾದರೂ ಭದ್ರತಾ ಪಡೆಗಳು ಅವರನ್ನು ಹತ್ಯೆಗೈದಿವೆ ಎಂದು ಖೋಗ್ಯಾನಿ ಹೇಳಿದ್ದಾರೆ.
ಕಾರ್ ಬಾಂಬ್ ಸ್ಫೋಟ; 15 ಜನ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ
Follow Us