ಬೀಜಿಂಗ್: ಭಾರೀ ಮಳೆ ಹಾಗೂ ಪ್ರವಾಹದಿಂದ ಚೀನಾ ತತ್ತರಿಸಿದೆ. ಪ್ರವಾಹದಿಂದಾಗಿ ಸುಮಾರು 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 38 ಲಕ್ಷಕ್ಕೂ ಅಧಿಕ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ದೇಶದಲ್ಲಿನ 433 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಲಕ್ಷಾಂತರ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸುವುದೇ ಕಷ್ಟದಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಪೊಯಾಂಗ್ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಿಯಾಂಟಂಗ್ ನದಿ ಸುತ್ತಮುತ್ತಲೂ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಮೂರು ಅಂತಸ್ತಿನ ಕಟ್ಟಡವೊಂದು ಜಿಯಾಂಕ್ಸಿಯಲ್ಲಿ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.
ಚೀನಾದ 13 ಪ್ರಾಂತ್ಯಗಳಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ಸಂಭವಿಸಿದ ಆರ್ಥಿಕ ನಷ್ಟ ಅಂದಾಜು 25.7 ಬಿಲಿಯನ್ ಗೆ (3.6 ಬಿಲಿಯನ್ ಡಾಲರ್) ತಲುಪಿರುವುದಾಗಿ ವರದಿ ತಿಳಿಸಿದೆ.