ವಾಷ್ಟಿಂಗ್ಟನ್: ಜಾಗತಿಕ ವಾತಾವರಣದಲ್ಲಿ ಸಂಭವಿಸುತ್ತಿರುವ ದುಷ್ಪರಿಣಾಮ ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶುದ್ಧ ಇಂಧನ ಬಳಕೆ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮತ್ತು ಸಂಶೋಧನೆಗೆ ಆದ್ಯತೆ ನೀಡುವುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಜೋ ಬಿಡೆನ್ ಹೇಳಿದ್ದಾರೆ. ಅವರ ಈ ಪ್ರಸ್ತಾಪಕ್ಕೆ ವಿಶ್ವದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಬಿಡೆನ್, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲಿದ್ದಾರೆ.
ಕೇವಲ ಅಮೆರಿಕಕ್ಕೆ ಮಾತ್ರವಲ್ಲ. ವಿಶ್ವದ ಇತರ ರಾಷ್ಟ್ರಗಳು ಇದರಿಂದ ಪ್ರಯೋಜನ ಪಡೆಯಲಿವೆ ಎಂಬುದು ಪರಿಣಿತರ ವಾದ. ಜಾಗತಿಕ ತಾಪಮಾನ ಕ್ಷೇತ್ರದ ಪರಿಣಿತರಾಗಿರುವ ಕ್ಲಿಯೋನಾ ಹೊವೈ ಈ ಕುರಿತು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ನೂತನ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಇದು ವೇದಿಕೆ ಕಲ್ಪಿಸಲಿದೆ. ಇದರ ಪ್ರಯೋಜನ ಅಮೆರಿಕದ ಜತೆ ಜತೆಗೆ ಇತರ ರಾಷ್ಟ್ರಗಳಿಗೂ ಲಭಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನ ಬಿಕ್ಕಟ್ಟು ಬೌದ್ಧಿಕ ಸಂಪತ್ತಲ್ಲ. ಇದು ಸ್ಪರ್ಧಾತ್ಮಕ ಚಟುವಟಿಕೆಯ ವೇದಿಕೆಯೂ ಅಲ್ಲ. ಎಲ್ಲರೂ ಕೈ ಜೋಡಿಸಿ ಈ ಸವಾಲನ್ನು ಎದುರಿಸಬೇಕು ಎಂದು ಹೊವೈ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಪುನರುಜ್ಜೀವನ ನೀಡಲು ಎರಡು ಟ್ರಿಲಿಯನ್ ಡಾಲರ್ ನ ಹವಾಮಾನ ಯೋಜನಾ ನಿಧಿ ಯನ್ನು ಬಿಡೆನ್ ಪ್ರಕಟಿಸಿದ್ದಾರೆ. ಇದರಿಂದ ಆರ್ಥಿಕತೆ ವೇಗ ಪಡೆದುಕೊಳ್ಳಲಿದೆ ಮತ್ತು ಜಾಗತಿಕ ತಾಪಮಾನ ಬಿಕ್ಕಟ್ಟನ್ನು ಬಗೆಹರಿಸಲು ಸಾಧ್ಯವಾಗಲಿದೆ ಎಂಬ ಆಶಯವನ್ನು ಅವರು ಪ್ರಕಟಿಸಿದ್ದಾರೆ.