♦ ಟ್ರಂಪ್ ವರ್ತನೆಗೆ ಫೇಸ್’ಬುಕ್ ಸಿಇಒ ಜುಕರ್‌ಬರ್ಗ್ ಅಸಮಾಧಾನ
ವಾಷಿಂಗ್ಟನ್: ಕೊರೋನಾ ನಿರ್ವಹಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋತಿದ್ದಾರೆ ಎಂದು ಅಮೆರಿಕನ್ನರು ಆರೋಪಿಸುತ್ತಿದ್ದಾರೆ.
ಅಮೆರಿಕನ್ನರ ಆರೋಪಕ್ಕೆ ದನಿಗೂಡಿಸಿರುವ ಫೇಸ್’ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್, ಕೊರೊನಾವೈರಸ್ ಬಿಕ್ಕಟ್ಟಿನ ಬಗ್ಗೆ ಟ್ರಂಪ್ ಆಡಳಿತ ಪ್ರತಿಕ್ರಿಯಿಸಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಫೇಸ್-ಮಾಸ್ಕ್ ಧರಿಸುವುದೂ ಸೇರಿ ಹಲವು ಸಾರ್ವಜನಿಕ ಆರೋಗ್ಯ ಕ್ರಮಗಳ ಬಗ್ಗೆ ವಿಜ್ಞಾನಿಗಳ ಸಲಹೆಯನ್ನು ದುರ್ಬಲಗೊಳಿಸಿದ ಸರ್ಕಾರದ ಕ್ರಮದಿಂದ ನಿರಾಸೆಯಾಗಿದೆ. ಕೋವಿಡ್ ಪರೀಕ್ಷೆ ವಿಧಾನವೂ ಸರಿಯಾಗಿಲ್ಲ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.
ಈ ಮಧ್ಯೆ, ಅಮೆರಿಕದಲ್ಲಿ ‘ಮಾಸ್ಕ್ ಪಾಲಿಟಿಕ್ಸ್’ ಮುಂದುವರಿದಿದೆ. ಅಧ್ಯಕ್ಷ ಟ್ರಂಪ್ ಹಾಗೂ ಡೆಮಾಕ್ರಟಿಕ್ ಸದಸ್ಯರ ನಡುವೆ ಮಾಸ್ಕ್ ವಿಚಾರದಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆ. ಮಾಸ್ಕ್ ತೊಡುವುದು ಅನಿವಾರ್ಯ ಎಂದು ತಜ್ಞರು ಸಲಹೆ ನೀಡಿದ್ದರೂ, ತನ್ನ ದೇಶದ ಪ್ರಜೆಗಳಿಗೆ ಮಾಸ್ಕ್ ಹಾಕುವಂತೆ ಒತ್ತಡ ಹೇರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸ್ವತಃ ಟ್ರಂಪ್ ಅವರೇ ಮಾಸ್ಕ್ ತೊಡದೆ ಹಠ ಮಾಡುತ್ತಿದ್ದರು. ಆದರೆ ಕಳೆದ ವಾರವಷ್ಟೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಸ್ಕ್ ತೊಟ್ಟು ಅಚ್ಚರಿಗೆ ಕಾರಣವಾಗಿದ್ದರು.
ಅಮೆರಿಕದಲ್ಲಿ ಊಹೆಗೂ ನಿಲುಕದಷ್ಟು ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ನಿತ್ಯ ಸುಮಾರು 70 ಸಾವಿರ ಹೊಸ ಕೇಸ್‌ಗಳು ದಾಖಲಾಗುತ್ತಿವೆ. ಸೋಂಕು ತೀವ್ರವಾಗಿ ಹಬ್ಬುತ್ತಿರುವಾಗಲೇ ಲಾಕ್‌ಡೌನ್ ನಿಯಮವನ್ನು ಟ್ರಂಪ್ ಸಡಿಲಗೊಳಿಸಿದ್ದರು. ಹೋಟೆಲ್, ಪಾರ್ಕ್, ಬೀಚ್, ಮಾಲ್ ಹೀಗೆ ಎಲ್ಲವನ್ನೂ ಒಟ್ಟಿಗೆ ತೆರೆಯಲು ಅನುಮತಿ ನೀಡಿದ್ದರು.
ಟ್ರಂಪ್ ಅವರು ಕೊರೋನಾ ನಿಯಂತ್ರಣ ವಿಚಾರದಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಗಳು ಸ್ವಪಕ್ಷೀಯರಲ್ಲೇ ಬೇಸರ ಮೂಡಿಸುತ್ತಿದ್ದು, ರಿಪಬ್ಲಿಕನ್ ಪಕ್ಷದೊಳಗೆ ಟ್ರಂಪ್ ವಿರುದ್ಧ ಮುನಿಸು ಹೆಚ್ಚುತ್ತಿದೆ. ಅಧ್ಯಕ್ಷ ಟ್ರಂಪ್ ವರ್ತನೆಯನ್ನು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೊನಿ ಫೌಸಿ ನೇರಾನೇರ ಖಂಡಿಸಿದ್ದಾರೆ. ಇದು 1918 ಸ್ಪ್ಯಾನಿಶ್ ಫ್ಲೂಗಿಂತಲೂ ಕೆಟ್ಟ ಪರಿಸ್ಥಿತಿ ಸೃಷ್ಟಿಸಲಿದೆ ಎಂದಿದ್ದಾರೆ.
ಸದ್ದುಗದ್ದಲವಿಲ್ಲದೆ ನಡೆದ ಬ್ರಿಟನ್ ರಾಣಿ ಮೊಮ್ಮಗಳ ಮದುವೆ