ಪ್ಯಾರಿಸ್: ಕೊರೋನಾದಿಂದ ಉಂಟಾಗಿರುವ ಐತಿಹಾಸಿಕ ಆರ್ಥಿಕ ಕುಸಿತದಿಂದ ಯುರೋಪಿಯನ್ ಒಕ್ಕೂಟದ 27 ದೇಶಗಳು ತಲ್ಲಣಗೊಂಡಿವೆ.
ಕೊರೋನಾ ಪರಿಣಾಮದಿಂದ ಉತ್ಪಾದನೆ 7 ಪರ್ಸೆಂಟ್ ಗಿಂತಲೂ ಹೆಚ್ಚು ಇಳಿಕೆಯಾಗಿದೆ ಎಂದು ಬುಧವಾರ ಯುರೋಪಿಯನ್ ಒಕ್ಕೂಟ ತಿಳಿಸಿದೆ.
ಯುರೋಪಿಯನ್ ಒಕ್ಕೂಟದಲ್ಲಿ ಒಟ್ಟು 27 ದೇಶಗಳಿವೆ. 2021ರಲ್ಲಿ 6 ಪರ್ಸೆಂಟ್ ನಷ್ಟು ಬೆಳವಣಿಗೆ ಸಾಧಿಸಬಹುದು ಎಂದಿದ್ದು, ಅದಕ್ಕೂ ಮುನ್ನ ಈ ವರ್ಷ 7.5 ಪರ್ಸೆಂಟ್ ಇಳಿಕೆ ಆಗಲಿದೆ ಎನ್ನಲಾಗಿದೆ. ಒಟ್ಟು 19 ದೇಶಗಳು ಅಲ್ಲಿನ ಕರೆನ್ಸಿಯಾಗಿ ಯುರೋವನ್ನೇ ಚಲಾವಣೆಗೆ ಬಳಸುತ್ತವೆ. ಅವು ಈ ವರ್ಷ 7.75 ದಾಖಲೆಯ ಕುಸಿತ ಕಾಣಬಹುದು.
ಆರ್ಥಿಕ ಮಹಾಕುಸಿತದ ನಂತರ ಈಗಿನಂಥ ಸಮಸ್ಯೆಯನ್ನು ಯುರೋಪ್ ಎಂದೂ ಎದುರಿಸಿರಲಿಲ್ಲ ಎಂದು ಯುರೋಪಿಯನ್ ಒಕ್ಕೂಟದ ಆರ್ಥಿಕತೆ ಕಮಿಷನರ್ ಪಾಲೋ ಜೆಂಟಿಲೊನಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂದ ಹಾಗೆ ಯುರೋಪ್ ನಲ್ಲಿ 11 ಲಕ್ಷ ಮಂದಿಗೆ ಕೊರೋನಾ ಹಬ್ಬಿದ್ದು, 1,37,000 ಮಂದಿ ಸಾವನ್ನಪ್ಪಿದ್ದಾರೆ.