ವಿಜಯಪುರ: ಜಿಲ್ಲೆಯ ಬರಟಗಿ ಲಂಬಾಣಿ ತಾಂಡಾದ ಕನ್ನಡಿಗರೊಬ್ಬರು ಪ್ರವಾಹಪೀಡಿತ ವಿದೇಶದಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ.
ಕನ್ನಡಿಗ ಕೇತನ್ ನಾಯ್ಕ ಅವರ ಮಾನವೀಯತೆಯಯನ್ನು ಕೀನ್ಯಾ ಮಾಧ್ಯಮಗಳು ಹಾಡಿ ಹೊಗಳಿವೆ. 2017ರಲ್ಲಿ ಆಫ್ರಿಕಾ ಖಂಡದ ಕೀನ್ಯಾಗೆ ತೆರಳಿದ್ದ ಕೇತನ್ ನಾಯ್ಕ್ ಅವರು ರಾಯ್ ಗ್ರೂಪ್ ಆಫ್ ಕಂಪನೀಸ್ನ ಸಕ್ಕರೆ ಕಾರ್ಖಾನೆಯಲ್ಲಿ ಕೃಷಿ ಮ್ಯಾನೇಜರ್ ಆಗಿದ್ದರು. ಪಶ್ಚಿಮ ಕೀನ್ಯಾದ ನಿವಾನಿ, ಜಮಾನಾ, ಪೊಂಗಲ್‌ಬೀಜಾ ಸೇರಿದಂತೆ ಸುಮಾರು 20ರಿಂದ 30 ಗ್ರಾಮಗಳಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಅಲ್ಲಿನ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಕೂಡಲೆ ಜಾಗೃತನಾದ ಈತ ತನ್ನ ಕಂಪನಿಯ ಮುಖ್ಯಸ್ಥ ತೇಜವೀರ್‌ಸಿಂಗ್ ಅವರಿಗೆ ಫೋನ್ ಮಾಡಿ ನೆರವಾಗುವ ಬಗ್ಗೆ ಕೇಳಿದರು. ಆಗ ಆತನ ಕಂಪನಿಯ ಮಾಲೀಕ ‘ನಿಮಗೆ ತಿಳಿದಂತೆ ನೆರವಾಗಿ’ ಎಂದರು. ತಮ್ಮ ಕಾರ್ಖಾನೆಯ ಕಾರ್ಮಿಕರ ಜತೆಗೂಡಿ ನೆರೆ ಸಂತ್ರಸ್ತರಿಗೆ ನೆರವಾದ ಕೇತನ್ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಿ, ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದಾರೆ. ಅಲ್ಲಿ ನಿರಾಶ್ರಿತರ ಶಿಬಿರ ತೆರೆದು ಅವರಿಗೆ ಅಗತ್ಯವಾದ ಮೆಕ್ಕೆಜೋಳ, ಎಣ್ಣೆ, ಸಕ್ಕರೆ, ಸೋಪು, ಬಿಸ್ಕತ್ ಸೇರಿ ಹಲವು ಸಾಮಗ್ರಿಗಳನ್ನು ಒದಗಿಸಿದ್ದಾರೆ. ಹೀಗೆ ಕೀನ್ಯಾದವರ ಹೊಗಳಿಕೆಗೆ ಪಾತ್ರರಾಗಿದ್ದಾರೆ.
ಕೀನ್ಯಾ ಪ್ರವಾಹ ಸಂತ್ರಸ್ತರಿಗೆ ನೆರವಾದ ಕನ್ನಡಿಗ
Follow Us