* ಅಂದು ಸ್ಪಾನೀಷ್ ಫ್ಲೂ, ಇಂದು ಕೊರೋನಾ ಹಿನ್ನೆಲೆ
ಸಿಡ್ನಿ: ಸುಮಾರು ನೂರು ವರ್ಷಗಳ ಬಳಿಕ ಮತ್ತೆ ಆಸ್ಟ್ರೇಲಿಯಾದ ಎರಡು ಜನಪ್ರಿಯ ರಾಜ್ಯಗಳ ನಡುವೆ ಗಡಿ ಬಂದ್ ಆಗಲಿದೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾವಧಿಗೆ ಗಡಿಗಳನ್ನು ಲಾಕ್ಡೌನ್ ಮಾಡಲಾಗುತ್ತಿದೆ.
ಆಸ್ಟ್ರೇಲಿಯಾದ ಪ್ರಮುಖ ರಾಜ್ಯಗಳಾದ ವಿಕ್ಟೋರಿಯಾ ಹಾಗೂ ನ್ಯೂ ಸೌಥ್ ವೇಲ್ಸ್ ನಡುವಿನ ಸಂಪರ್ಕ ಕಡಿತಗೊಳ್ಳಲಿದೆ. ಎರಡು ರಾಜ್ಯಗಳ ನಡುವಿನ ಗಡಿಯನ್ನು 100 ವರ್ಷಗಳ ಬಳಿಕ ಬಂದ್ ಮಾಡಲಾಗುತ್ತಿದೆ. 1919ರಲ್ಲಿ ಸ್ಪಾನೀಷ್ ಫ್ಲೂ ಸಾಂಕ್ರಾಮಿಕ ರೋಗದ ಪಿಡುಗು ಎದುರಾದಾಗ ಮಾತ್ರ ಎರಡು ರಾಜ್ಯಗಳ ನಡುವೆ ಗಡಿ ಬಂದ್ ಮಾಡಲಾಗಿತ್ತು.
ಕಳೆದ ಮೂರು ದಶಕಗಳಲ್ಲೇ ಅತ್ಯಂತ ಕಳಪೆ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವ ಆಸ್ಟ್ರೇಲಿಯಾಕ್ಕೆ ಈ ರಾಜ್ಯಗಳ ನಡುವಿನ ಗಡಿ ಬಂದ್ ಭಾರಿ ಹೊಡೆತ ನೀಡಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ವಿಕ್ಟೋರಿಯಾದ ಪ್ರತಿನಿಧಿ ಡೇನಿಯಲ್ ಆಂಡ್ರ್ಯೂಸ್, ಇದು ಈ ಸಮಯಕ್ಕೆ ಅತ್ಯವಶ್ಯ, ಕೊರೋನಾ ಸೋಂಕು ತಡೆಗಟ್ಟಲು ಅಗತ್ಯ ಕ್ರಮವೆನಿಸಿದೆ ಎಂದಿದ್ದಾರೆ. ಎರಡು ರಾಜ್ಯಗಳ ನಡುವಿನ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಂಪರ್ಕದ ಬಗ್ಗೆ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಮಿಲಿಟರಿ ಪಡೆಯಿಂದ ಗಡಿಯಲ್ಲಿ ಗಸ್ತು ನಿಯೋಜನೆಯಾಗಲಿದೆ.
ವಿಕ್ಟೋರಿಯಾ, ಮೆಲ್ಬೋರ್ನ್’ನಲ್ಲಿ ಒಂದೇ ದಿನ 127 ಹೊಸ ಕೊರೋನಾ ಒಂದೇ ದಿನದಂದು ಪ್ರಕರಣ ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ದೇಶದಲ್ಲಿ 106 ಮಂದಿ ಮೃತರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ 8586 ಪಾಸಿಟಿವ್ ಪ್ರಕರಣಗಳಿವೆ.