newsics.com
ಇಸ್ಲಾಮಾಬಾದ್: ಅಕ್ರಮ ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದಚ್ಯುತ ಪ್ರಧಾನಿ ನವಾಜ್ ಷರೀಫ್ (70) ಬಂಧನಕ್ಕೆ ಪಾಕಿಸ್ತಾನ ಸರ್ಕಾರ ವಾರಂಟ್ ಹೊರಡಿಸಿದೆ.
‘ಷರೀಫ್ ಬಂಧನಕ್ಕೆ ಪಾಕಿಸ್ತಾನ ಸರ್ಕಾರವು ಹೊರಡಿಸಿರುವ ವಾರಂಟ್, ಲಂಡನ್‌ನಲ್ಲಿರುವ ಪಾಕಿಸ್ತಾನ ಹೈ ಕಮಿಷನ್‌ಗೆ ಗುರುವಾರವೇ ತಲುಪಿದೆ. ಈ ಬೆಳವಣಿಗೆಯ ಕುರಿತು ಹೈ ಕಮಿಷನ್ ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ’ ಎಂದು ದಿ ಡಾನ್ ದಿನಪತ್ರಿಕೆ ವರದಿ ಮಾಡಿದೆ.
ಷರೀಫ್ ಸದ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ. ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಷರೀಫ್ ಮಾಡಿಕೊಂಡಿದ್ದ ಮನವಿಯನ್ನು ಲಾಹೋರ್ ಹೈಕೋರ್ಟ್ ಪುರಸ್ಕರಿಸಿತ್ತು. ನಾಲ್ಕು ವಾರಗಳ ಕಾಲ ವಿದೇಶದಲ್ಲಿರಲು ಅನುಮತಿ ಲಭಿಸಿದ್ದರಿಂದ ಕಳೆದ ವರ್ಷದ ನವೆಂಬರ್‌ನಲ್ಲಿ ಷರೀಫ್, ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು. ನವಾಜ್, ಅವರ ಪುತ್ರಿ ಮರಿಯಂ ಹಾಗೂ ಅಳಿಯ ಮಹಮ್ಮದ್ ಸಫ್ದಾರ್ ಅವರು ಅಕ್ರಮ ಭೂ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಡಿಸೆಂಬರ್ 2018 ರಲ್ಲಿ ಅಲ್ ಅಜಿಜಿಯಾ ಸ್ಟೀಲ್ ಮಿಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿಯೂ ಅವರಿಗೆ ಜಾಮೀನು ಲಭಿಸಿತ್ತು. ‘ತವರಿಗೆ ಮರಳಲು ಷರೀಫ್‌ಗೆ ಎಂಟು ವಾರಗಳ ಗಡುವು ನೀಡಲಾಗಿತ್ತು. ಆರೋಗ್ಯ ಹದಗೆಟ್ಟಿರುವುದರಿಂದ ಅವರು ಇನ್ನೂ ಹಿಂತಿರುಗಿಲ್ಲ’ ಎಂದು ಷರೀಫ್ ಪರ ವಕೀಲರು ಹೇಳಿದ್ದಾರೆ.
ನವಾಜ್ ಷರೀಫ್ ಬಂಧನಕ್ಕೆ ಪಾಕ್ ಸರ್ಕಾರ ವಾರಂಟ್
Follow Us