ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಜತೆ ಮೂರನೆ ರಾಜತಾಂತ್ರಿಕ ಮಾರ್ಗದ ಮಾತುಕತೆಗೆ ಪಾಕಿಸ್ತಾನ ಅವಕಾಶ ನೀಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಈ ಮಾಹಿತಿ ನೀಡಿದ್ದಾರೆ.
ಭಾರತದ ಗೂಢಚಾರನೆಂದು ಆರೋಪಿಸಿ ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದೆ. ಇರಾನ್ ನಲ್ಲಿ ಬಂಧಿಸಲಾದ ಜಾಧವ್ ಅವರನ್ನು ಬಳಿಕ ತನ್ನ ನೆಲದಲ್ಲಿ ಬಂಧಿಸಲಾಯಿತು ಎಂಬ ಕಟ್ಟು ಕಥೆ ಹೆಣೆದಿದೆ. ಪಾಕಿಸ್ತಾನದ ವರ್ತನೆಯನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
ಇದೀಗ ಮಾತುಕತೆ ಸಂದರ್ಭದಲ್ಲಿ ಭದ್ರತಾ ಅಧಿಕಾರಿಗಳು ಉಪಸ್ಥಿತರಿರಬಾರದು ಎಂಬ ಭಾರತದ ಬೇಡಿಕೆಗೆ ಪಾಕಿಸ್ತಾನ ಸಮ್ಮತಿ ಸೂಚಿಸಿದೆ. ಇದನ್ನು ಖಾತರಿಪಡಿಸುವಂತೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ ಹೇಳಿದ್ದಾರೆ.
ಕುಲಭೂಷಣ್ ಜಾಧವ್ ಭಾರತದ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸ್ವಂತ ಉದ್ಯಮ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇರಾನ್ ಗೆ ತೆರಳಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿತ್ತು.