ಕರಾಚಿ: ಮೂರು ವರ್ಷಗಳ ನಿಷೇಧಕ್ಕೊಳಗಾಗಿರುವ ಬ್ಯಾಟ್ಸ್’ಮನ್ ಉಮರ್ ಅಕ್ಮಲ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಜೂನ್ 11ರಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾ.ಫಕೀರ್ ಮುಹಮ್ಮದ್ ಖೋಖರ್ ನಡೆಸಲಿದ್ದಾರೆ.
ನ್ಯಾ.ಖೋಖರ್ ಸ್ವತಂತ್ರ ತೀರ್ಪುಗಾರರಾಗಿ ಈ ವಿಚಾರಣೆ ನಡೆಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಶುಕ್ರವಾರ ಪ್ರಕಟಿಸಿದೆ. ವಿಚಾರಣೆ ಕುರಿತು ಉಮರ್ ಅಕ್ಮಲ್ ಹಾಗೂ ಪಿಸಿಬಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಕ್ರಿಕೆಟ್ ಮಂಡಳಿಯು ತನ್ನ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದೆ.
ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಪಂದ್ಯಗಳ ವೇಳೆ ತನ್ನನ್ನು ಬುಕ್ಕಿಗಳು ಸಂಪರ್ಕಿಸಿರುವ ವಿಚಾರವನ್ನು ಪಿಸಿಬಿಗೆ ಮಾಹಿತಿ ನೀಡದ ಕಾರಣಕ್ಕೆ ಏಪ್ರಿಲ್ 27ರಂದು ಪಿಸಿಬಿಯ ಶಿಸ್ತು ಸಮಿತಿಯು ಅಕ್ಮಲ್ಗೆ ಮೂರು ವರ್ಷಗಳ ನಿಷೇಧ ಹೇರಿತ್ತು. ಲಾಹೋರ್ನ ಡಿಫೆನ್ಸ್ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದ್ದ ಪ್ರತ್ಯೇಕ ಪಾರ್ಟಿಗಳಲ್ಲಿ ಅಕ್ಮಲ್ಗೆ ಸ್ಪಾಟ್ ಫಿಕ್ಸಿಂಗ್ ಆಫರ್ ನೀಡಲಾಗಿತ್ತು.