ಸಿಡ್ನಿ: ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಗಳಿಗಾಗಿ ವಿಡಿಯೋ ಸಂವಾದ ನಡೆಸಲು ಮುಂದಾಗಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಇದರ ಪೂರ್ವಸಿದ್ಧತೆ ಎಂಬಂತೆ ಭಾರತದ ರುಚಿಕರ ಸ್ನ್ಯಾಕ್ಸ್ ಸಮೋಸಾ ಹಾಗೂ ಮಾವಿನಕಾಯಿ ಚಟ್ನಿಯನ್ನು ತಾವೇ ಸಿದ್ಧಪಡಿಸಿದ್ದು ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ, ಆಸ್ಟ್ರೇಲಿಯಾ ಪ್ರಧಾನಿ, ಸ್ಕೊಮೋಸಾ ( ಸಮೋಸಾ)ಮತ್ತು ಮ್ಯಾಂಗೋ ಚಟ್ನಿಯನ್ನು ನಾನೇ ತಯಾರಿಸಿದ್ದೇನೆ. ಇದನ್ನು ಸಸ್ಯಾಹಾರಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಸೇವಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಇನ್ನು ಸ್ಕಾಟ್ ಮಾರಿಸನ್ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ನೀವು ತಯಾರಿಸಿದ ಸಮೋಸಾ ರುಚಿಯಾಗಿ ಕಾಣುತ್ತಿದೆ. ಕೋವಿಡ್ 19 ವಿರುದ್ಧ ನಾವು ವಿಜಯ ಸಾಧಿಸಿದ ಬಳಿಕ ನಾವು ಒಟ್ಟಿಗೆ ಕೂತು ಸಮೋಸಾ ಸವಿಯೋಣ ಎಂದು ಮರು ಟ್ವೀಟ್ ಮಾಡಿದ್ದಾರೆ.
ಇದೇ ಬರುವ ಜೂನ್ 4 ರಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಅದಕ್ಕೂ ಮುನ್ನವೇ ಸ್ವತಃ ಆಸ್ಟ್ರೇಲಿಯಾ ಪ್ರಧಾನಿ ಅಡುಗೆ ಮನೆಯಲ್ಲಿ ಭಾರತೀಯ ತಿನಿಸು ತಯಾರಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.