newsics.com
ಆರ್ಮೇನಿಯ: ಅಝರ್‌ಬೈಜಾನ್ ಮತ್ತು ಆರ್ಮೇನಿಯ ದೇಶಗಳ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾಗಿದ್ದು, ಉಭಯ ದೇಶಗಳ ಹಲವು ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿವಾದಾಸ್ಪದ ನಗೊರ್ನೊ-ಕರಬಾಖ್ ವಲಯದಲ್ಲಿ ಭಾನುವಾರ ಸಂಘರ್ಷ ಸ್ಫೋಟಿಸಿದ್ದು, ಎರಡು ದೇಶಗಳ ನಡುವೆ ನಗೊರ್ನೊ-ಕರಬಾಖ್ ಒಡೆತನದ ವಿಚಾರದಲ್ಲಿ ಸುದೀರ್ಘಾವಧಿಯಿಂದ ಸಂಘರ್ಷವಿದೆ.
ಅಝರ್‌ಬೈಜಾನ್ ವಾಯು ಮತ್ತು ಫಿರಂಗಿ ದಾಳಿ ನಡೆಸಿದೆ ಎಂದು ಆರ್ಮೇನಿಯ ಆರೋಪಿಸಿದೆ. ಅಝರ್‌ಬೈಜಾನ್ ದೇಶದಲ್ಲಿ ಸೇನಾಡಳಿತ ಘೋಷಣೆಯಾಗಿದ್ದು, ಸೇನಾ ಜಮಾವಣೆಗೆ ಆದೇಶ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಸಂಘರ್ಷಕ್ಕೆ ಆರ್ಮೇನಿಯ ಕಾರಣ ಎಂದು ದೂರಿರುವ ಅಝರ್‌ಬೈಜಾನ್, ಗಡಿಯಲ್ಲಿ ನಡೆಯುತ್ತಿರುವ ಶೆಲ್ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದೆ ಎಂದು ಹೇಳಿದೆ. 2016ರ ಏಪ್ರಿಲ್’ನಲ್ಲಿ ಭೀಕರ ಸಂಘರ್ಷ ನಡೆದಿದ್ದು, ಸುಮಾರು 110 ಮಂದಿ ಸಾವಿಗೀಡಾಗಿದ್ದರು. ಈ ವರ್ಷದ ಜುಲೈ ತಿಂಗಳಲ್ಲೂ ಸಂಘರ್ಷ ನಡೆದಿದ್ದು, ಕನಿಷ್ಠ 16 ಮಂದಿ ಮೃತಪಟ್ಟಿದ್ದರು.
ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳೆರಡೂ ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದು, 1991ರಲ್ಲಿ ಸೋವಿಯತ್ ಒಕ್ಕೂಟ ಕುಸಿದ ಬಳಿಕ ಅವುಗಳು ಸ್ವತಂತ್ರ ದೇಶಗಳಾದವು. ನಗೊರ್ನೊ-ಕರಬಾಖ್‌ಗಾಗಿ ಎರಡೂ ದೇಶಗಳು ಸಂಘರ್ಷದಲ್ಲಿ ತೊಡಗಿವೆ.
ಅಝರ್‌ಬೈಜಾನ್-ಆರ್ಮೇನಿಯ ನಡುವೆ ಯುದ್ಧ ಸ್ಥಿತಿ; ಹಲವು ಸೈನಿಕರ ಸಾವು
Follow Us